కర్నూలు పట్టణం నుండి వెలువడే సమగ్ర తెలుగు దినపత్రిక గణేష్ 8 ఏప్రిల్ 2025 సంచికలో నేను కన్నడ నుండి అనువదించిన కు.స.మధుసూదన రంగేనహళ్ళి గారి బెంగాల్ బార్ డ్యాన్సర్ ప్రచురితమయ్యింది. దానిని ఈ క్రింద చదవండి. మీ సౌలభ్యం కోసం కన్నడ మూల పాఠం కూడా ఇస్తున్నాను.
ಬಂಗಾಳದ ಬಾರ್ ಡಾನ್ಸರ್
ಅವಳು ತನ್ನ ಸುತ್ತಲೇ
ಸುತ್ತುತ್ತಿದ್ದಾಳೆ ಬುಗುರಿಯಂತೆ
ಸುತ್ತಣದ ಪರಿವೆಯಿರದೆ
ಯಾರೊ ಬಂದರು
ಯಾರೋ ಕೇಕೆ ಹಾಕಿದರು
ಮತ್ತಿನ್ಯಾರೋ ಕುಣಿದರು
ಅರಿವಿಲ್ಲ ಅವಳಿಗೆ
ಡಾನ್ಸ್ ಬಾರಿನಾ ವೇದಿಕೆಯ
ಹತ್ತು ಹತ್ತು ಅಳತೆಯ
ಚೌಕಾಕೃತಿಯ ಒಳಗೆ
ಕಿವಿಗಡಚಿಕ್ಕುವ ಸಂಗೀತದಬ್ಬರಕೆ
ಸುಮ್ಮನೆ ಕುಣಿಯುವುದಷ್ಟೇ ಕೆಲಸ
ನಡುನಡುವೆ ಕೇಳಿಬರುವ
ಪ್ರೇಕ್ಷಕರ ಕಿರುಚಾಟಗಳು
ಕಾಮೋದ್ರಿಕ್ತ ಕೊಳಕು
ಮನಸುಗಳ ಕೇಕೆಗಳು
ಅರಚಾಟಗಳ ಲೆಕ್ಕಕ್ಕೆ
ತೆಗೆದುಕೊಳ್ಳದವಳ ಏಕಾಗ್ರತೆಗೆ
ಎಂತಾ ಋಷಿಮುನಿಗಳೂ ನಾಚಬೇಕು
ಕೊಟ್ಟ ಅವಧಿ ಮುಗಿದ ಮೇಲೆ
ಕುಣಿತ ಮಣಿತಗಳಿಗೆ
ವಿರಾಮವನಿಟ್ಟು
ನೆಲದ ಮೇಲೆ ಬಿದ್ದ
ನೋಟುಗಳನ್ನಾರಿಸಿಕೊಳ್ಳುವಾಗ ಮಾತ್ರ
ಬಂಗಾಳದ ಹಳ್ಳಿಯಲ್ಲಿರುವ
ಅಮ್ಮ ಅಪ್ಪನ ಅಕ್ಕತಂಗಿಯರ ಮುಖಗಳು
ಕಣ್ಮುಂದೆ ಕುಣಿಯುತ್ತವೆ
ಸಂಗೀತದ ಹಂಗಿರದೆ!
- ಕು.ಸ.ಮಧುಸೂದನ ರಂಗೇನಹಳ್ಳಿ